Sunday, February 14, 2016

ನಾನೂ ಒಮ್ಮೆ ಬರೆಯುತ್ತಿದ್ದೆ

ನಾನೂ ಒಮ್ಮೆ ಬರೆಯುತ್ತಿದ್ದೆ 
ಹಳೆ ಡೈರಿಯ ಹಾಳೆಗಳಲಿ 
ಪುಟ್ಟ ಕೈಗಳ ಗೀಚಕ್ಷರಗಳಲಿ 
ಬಾಲ್ಯದ ಮುಗ್ಧತೆಯಲಿ 
ಯೌವ್ವನದ ಹುಮ್ಮಸ್ಸಿನಲಿ 
ಜಗವನು ಗೆಲ್ಲುವ ಛಲದಲಿ
ಸುಖ, ದುಃಖ, ರೋಷ, ಕೋಪದಲಿ 
ಮನಸ್ಸಿಗೆ ಬಂದುದು, ಇದ್ದದ್ದು ಇದ್ದ ಹಾಗೆ 
ನಾನೂ ಒಮ್ಮೆ ಬರೆಯುತ್ತಿದ್ದೆ !

 ಬುದ್ಧಿ ಬಲಿದು ಬೆಳೆದು ನಿಂತಾಗ -
ದೇಶ ವಿದೇಶಗಳ ಅಲೆದಾಟದಲಿ
ನಾ ಯಾರು, ಏನೆಂಬ ಹುಡುಕಾಟದಲಿ, 
ಜೀವನದ ಗೊಂದಲ, ಜಂಜಾಟದಲಿ,
ಸರಿ ತಪ್ಪುಗಳ ಹೊಯ್ದಾಟದಲಿ 
ಮೌನಗಳ  ಕೂಗಾಟದಲಿ
ಕೈ ನಡುಗಿದೆ, ಧ್ವನಿ ಉಡುಗಿದೆ ...

ಹೇಳಲೇನೋ ನೆನೆದುದು ಬಿಸಿ ತುಪ್ಪದ ಹಾಗೆ -
ಎಳೆ ಎಳೆ ಬಿಡಿಸಿ ಹೇಳಲಾಗದೆ,
ಹಾಗೆ ಹೇಳದೆ ಇರಲೂ ಆಗದೆ,
ಸ್ಮಾರ್ಟ್ ಫೋನಿನ ಪುಟ್ಟ ಪರದೆಯಲಿ 
ನಾಲ್ಕು ಸಾಲು ಕಿಟಿ ಕಿಟಿಸಿ, 'ಪೋಸ್ಟ್' ಮಾಡಿ,
'ಲೈಕ್' ಗಳಿಗಾಗಿ ಹಪಹಪಿಸಿ 
ಬರೆದದೆಲ್ಲ ಅರೆ ಹಸಿ, ಅರೆ ಹುಸಿ; 
ಮನದಾಳದ ಮಾತು ಅಲ್ಲೇ ಬಾಕಿ !! 



2 comments:

Anand Behere said...

ಎಷ್ಟೋ ದಿನಗಳ ಬಳಿಕ ಒಳ್ಳೆಯ ಕವಿತೆ ಓದಿದೆ. ಇನ್ನೂ ಲೇಖನಗಳು, ಕವಿತೆಗಳು ಇದ್ದಲ್ಲಿ ತಿಳಿಸಿ

Anand Behere said...

ಎಷ್ಟೋ ದಿನಗಳ ಬಳಿಕ ಒಳ್ಳೆಯ ಕವಿತೆ ಓದಿದೆ. ಇನ್ನೂ ಲೇಖನಗಳು, ಕವಿತೆಗಳು ಇದ್ದಲ್ಲಿ ತಿಳಿಸಿ