ನಾನೂ ಒಮ್ಮೆ ಬರೆಯುತ್ತಿದ್ದೆ
ಹಳೆ ಡೈರಿಯ ಹಾಳೆಗಳಲಿ
ಪುಟ್ಟ ಕೈಗಳ ಗೀಚಕ್ಷರಗಳಲಿ
ಬಾಲ್ಯದ ಮುಗ್ಧತೆಯಲಿ
ಯೌವ್ವನದ ಹುಮ್ಮಸ್ಸಿನಲಿ
ಜಗವನು ಗೆಲ್ಲುವ ಛಲದಲಿ
ಸುಖ, ದುಃಖ, ರೋಷ, ಕೋಪದಲಿ
ಮನಸ್ಸಿಗೆ ಬಂದುದು, ಇದ್ದದ್ದು ಇದ್ದ ಹಾಗೆ
ನಾನೂ ಒಮ್ಮೆ ಬರೆಯುತ್ತಿದ್ದೆ !
ಬುದ್ಧಿ ಬಲಿದು ಬೆಳೆದು ನಿಂತಾಗ -
ದೇಶ ವಿದೇಶಗಳ ಅಲೆದಾಟದಲಿ
ನಾ ಯಾರು, ಏನೆಂಬ ಹುಡುಕಾಟದಲಿ,
ಜೀವನದ ಗೊಂದಲ, ಜಂಜಾಟದಲಿ,
ಸರಿ ತಪ್ಪುಗಳ ಹೊಯ್ದಾಟದಲಿ
ಮೌನಗಳ ಕೂಗಾಟದಲಿ
ಕೈ ನಡುಗಿದೆ, ಧ್ವನಿ ಉಡುಗಿದೆ ...
ಹೇಳಲೇನೋ ನೆನೆದುದು ಬಿಸಿ ತುಪ್ಪದ ಹಾಗೆ -
ಎಳೆ ಎಳೆ ಬಿಡಿಸಿ ಹೇಳಲಾಗದೆ,
ಹಾಗೆ ಹೇಳದೆ ಇರಲೂ ಆಗದೆ,
ಸ್ಮಾರ್ಟ್ ಫೋನಿನ ಪುಟ್ಟ ಪರದೆಯಲಿ
ನಾಲ್ಕು ಸಾಲು ಕಿಟಿ ಕಿಟಿಸಿ, 'ಪೋಸ್ಟ್' ಮಾಡಿ,
'ಲೈಕ್' ಗಳಿಗಾಗಿ ಹಪಹಪಿಸಿ
ಬರೆದದೆಲ್ಲ ಅರೆ ಹಸಿ, ಅರೆ ಹುಸಿ;
ಮನದಾಳದ ಮಾತು ಅಲ್ಲೇ ಬಾಕಿ !!